skanda sashti puja festivals in Kannada

ಸ್ಕಂದ ಷಷ್ಠಿ ವ್ರತವನ್ನು ಪ್ರತಿ ತಿಂಗಳ ಶುಕ್ಲ ಪಕ್ಷದ ಮತ್ತು ಕೃಷ್ಣ ಪಕ್ಷದ ಷಷ್ಠಿ ತಿಥಿಯಂದು ಆಚರಿಸಲಾಗುತ್ತದೆ. ಹಿಮದೂ ಧರ್ಮದಲ್ಲಿ ಸ್ಕಂದ ಷಷ್ಠಿಗೆ ವಿಶೇಷ ಮಹತ್ವವಿದೆ. ಸ್ಕಂದ ಷಷ್ಠಿ ದಿನದಂದು ಭಗವಾನ್‌ ಕಾರ್ತಿಕೇಯನನ್ನು ಅಂದರೆ ಸುಬ್ರಹ್ಮಣ್ಯನನ್ನು ಪೂಜಿಸುವ ಸಂಪ್ರದಾಯವನ್ನು ಒಳಗೊಂಡಿದೆ. ಈ ದಿನ ಕಾರ್ತಿಕೇಯನನ್ನು ಪೂಜಿಸುವುದರಿಂದ ಶಿವ ಮತ್ತು ಪಾರ್ವತಿ ದೇವಿಯ ಕೃಪೆಯು ಪ್ರಾಪ್ತವಾಗುತ್ತದೆ. ಮತ್ತು ವ್ಯಕ್ತಿಯ ಎಲ್ಲಾ ಇಷ್ಟಾರ್ಥಗಳು ಈಡೇರುತ್ತದೆ ಎನ್ನುವ ನಂಬಿಕೆಯಿದೆ.

ಫಾಲ್ಗುಣ ಸ್ಕಂದ ಷಷ್ಠಿ ಮಹತ್ವ:

ಸ್ಕಂದ ಷಷ್ಠಿ ವ್ರತವು ವಿಶೇಷ ಮಹತ್ವವನ್ನು ಹೊಂದಿರುವ ವ್ರತಗಳಲ್ಲಿ ಒಂದಾಗಿದೆ. ಈ ದಿನ ಶಿವ ಮತ್ತು ಪಾರ್ವತಿ ಸುತನಾದ ಸುಬ್ರಹ್ಮಣ್ಯನನ್ನು ಪೂಜಿಸಲಾಗುತ್ತದೆ. ಸ್ಕಂದ ಷಷ್ಠಿ ವ್ರತವನ್ನು ಆಚರಿಸುವುದರಿಂದ ಮತ್ತು ನಿಯಮಗಳ ಪ್ರಕಾರ ಪೂಜೆ ಮಾಡುವುದರಿಂದ ಮಕ್ಕಳು ಪ್ರಗತಿ ಹೊಂದುತ್ತಾರೆ ಮತ್ತು ಅದೇ ಸಮಯದಲ್ಲಿ ಸಂತೋಷದ ಜೀವನವನ್ನು ನಡೆಸುತ್ತಾರೆ ಎಂದು ನಂಬಲಾಗಿದೆ. ಸಂತಾನ ಹೊಂದಲು ಬಯಸುವವರು ಈ ವ್ರತವನ್ನು ಆಚರಿಸಬೇಕು.

ಸ್ಕಂದ ಷಷ್ಠಿ ಪೂಜೆ ವಿಧಾನ:

ಸ್ಕಂದ ಷಷ್ಠಿಯ ದಿನ ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿ.
– ಇದಾದ ನಂತರ ಕಾರ್ತಿಕೇಯನಿಗೆ ಹೂವು, ಹಣ್ಣು, ಅಕ್ಷತೆ, ಧೂಪ, ದೀಪ, ಗಂಧ, ಕೆಂಪು ಚಂದನ, ನವಿಲು ಗರಿ ಇತ್ಯಾದಿಗಳನ್ನು ಅರ್ಪಿಸಿ ಪೂಜಿಸಿ.
– ಈ ದಿನ ಷಷ್ಟಿ ಸ್ತೋತ್ರವನ್ನು ಪಠಿಸಲು ಮರೆಯದಿರಿ.
– ಹಾಗೆಯೇ ಶಿವ ಮತ್ತು ತಾಯಿ ಪಾರ್ವತಿಯನ್ನು ಪೂಜಿಸಿ. ‘ಓಂ ತತ್ಪುರುಷಾಯ ವಿದ್ಮಹೇ| ಮಹಾ ಸೈನ್ಯಾಯ ಧೀಮಹಿ| ತನ್ನೋ ಸ್ಕಂದ ಪ್ರಚೋದಯಾತ್’ ಎಂಬ ಮಂತ್ರವನ್ನು ಪಠಿಸುವುದರಿಂದ ಈ ದಿನ ಬಯಸಿದ ಫಲವನ್ನು ಪಡೆಯಲು ಅನುಕೂಲವಾಗುತ್ತದೆ.

ಸ್ಕಂದ ಷಷ್ಠಿ ವ್ರತ ಕಥೆ:

ತಾರಕಾಸುರನೆಂಬ ರಾಕ್ಷಸನು ಶಿವ ಮತ್ತು ಪಾರ್ವತಿಯ ಮಗನಿಂದ ಹೊರತುಪಡಿಸಿ ಬೇರಾರಿಗೂ ನನ್ನನ್ನು ಕೊಲ್ಲಲು ಸಾಧ್ಯವಾಗಬಾರದೆಂಬ ವರವನ್ನು ಪಡೆದಿದ್ದನು. ಈ ವರದ ಪ್ರಭಾವದಿಂದ ಅವನು ಜನರನ್ನು ಹಿಂಸಿಸಲು ಪ್ರಾರಂಭಿಸಿದನು. ಮಾನವರ ನಂತರ ತಾರಕಾಸುರನು ದೇವತೆಗಳ ಮೇಲೂ ತನ್ನ ದಬ್ಬಾಳಿಕೆಯನ್ನು ಮಾಡಲಾರಂಭಿಸುತ್ತಾನೆ. ತಾರಕಾಸುರನ ಕಾಟವನ್ನು ತಾಳಲಾರದೆ ದೇವರುಗಳು ಮತ್ತು ಇಂದ್ರ ದೇವನು ತ್ರಿದೇವರ ಬಳಿ ಸಹಾಯ ಕೋರಿ ಹೋಗುತ್ತಾರೆ. ದೇವರುಗಳ ಕಷ್ಟವನ್ನು ಕೇಳಿ ವಿಷ್ಣು ಅವರಿಗೆ ಸಹಾಯ ಮಾಡುವುದಾಗಿ ಒಪ್ಪಿಕೊಳ್ಳುತ್ತಾನೆ. ಭಗವಾನ್ ಶಿವ ಮತ್ತು ತಾಯಿ ಪಾರ್ವತಿ ತಮ್ಮ ಶಕ್ತಿಯಿಂದ ದೈವಿಕ ಕಿರಣವನ್ನು ಸೃಷ್ಟಿಸುತ್ತಾರೆ, ಅದನ್ನು ಅಗ್ನಿದೇವನು ತೆಗೆದುಕೊಂಡು ಹೋಗುತ್ತಾನೆ. ಆದರೆ ಅಗ್ನಿಯು ಆ ರಾಶಿಯ ಶಾಖವನ್ನು ತಾಳಲಾರದೆ ಹೋದಾಗ, ಅವನು ಅದನ್ನು ಗಂಗೆಯಲ್ಲಿ ಎಸೆಯುತ್ತಾನೆ. ಗಂಗೆಯು ಆ ಮಗುವನ್ನು ದೈವಿಕ ಶಕ್ತಿಗಳೊಂದಿಗೆ ರಕ್ಷಿಸುತ್ತಾಳೆ. ನಂತರ ಕಾರ್ತಿಕೇಯನನ್ನು ದೇವತೆಗಳ ಸೇನಾದಿಪತಿಯನ್ನಾಗಿ ಮಾಡಲಾಗುತ್ತದೆ ಮತ್ತು ನಂತರ ಅವನು ತಾರಕಾಸುರನನ್ನು ಆಕ್ರಮಣ ಮಾಡಿ ಸೋಲಿಸುತ್ತಾನೆ. ತಾರಕಾಸುರನನ್ನು ವಧಿಸಿದ ತಕ್ಷಣ, ಎಲ್ಲಾ ತೊಂದರೆಗಳು ಕಡಿಮೆಯಾಗುತ್ತವೆ ಮತ್ತು ಮಾನವರು – ದೇವರುಗಳೆಲ್ಲರೂ ಶಾಂತಿಯುತವಾಗಿ ತಮ್ಮ ಕೆಲಸವನ್ನು ಮುಂದುವರೆಸುತ್ತಾರೆ. ತಾರಕಾಸುರನನ್ನು ಕಾರ್ತೀಕೇಯ ಸಂಹಾರ ಮಾಡಿದ ದಿನವನ್ನೇ ಸ್ಕಂದ ಷಷ್ಠಿ ಎಂದು ಆಚರಿಸಲಾಗುತ್ತದೆ.

Please follow and like us:
Bookmark the permalink.

Comments are closed.